ಹಿಂದೂ ನದಿಗಳ ಉಗಮ ಸ್ಥಾನಗಳು ಮತ್ತು ಹಿಂದಿನ ಪುರಾಣ ದಂತಕಥೆ

ಭಾರತದಲ್ಲಿ ಪ್ರತಿಯೊಂದು ನದಿಯನ್ನು ತಾಯಿಯ ರೂಪದಲ್ಲಿ ನೋಡುತ್ತಾರೆ ಮತ್ತು ತಾಯಿಗೆ ಹೋಲಿಸುತ್ತಾರೆ ಹಾಗು ಮಾತೃದೇವತೆಯಾಗಿ ಪೂಜಿಸುತ್ತಾರೆ. ಏಕೆಂದರೇ ತಾಯಿ ಜನ್ಮ ನೀಡಿ ಜೀವನವನ್ನು ಉಳಿಸಿಕೊಡುವಂತೆಯೇ, ನದಿಗಳು ಜನರ ಜೀವನವಾಗಿವೆ ಅವರ ಜೀವನಾಡಿಗಳಾಗಿವೆ. ನದಿಗಳು ಕುಡಿಯುವ ನೀರು, ಕೃಷಿ, ಕೈಗಾರಿಕೆ ಹೀಗೆ ಜನರ ವಿವಿಧ ಅಗತ್ಯಗಳಿಗೆ ನೀರನ್ನು ಒದಗಿಸುತ್ತವೆ. ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತವೆ ಹಾಗು ಪ್ರಾಣಿ, ಪಕ್ಷಿ, ಗಿಡ, ಮರಗಳಿಗೆಲ್ಲರಿಗೂ ನದಿಗಳು ಜೀವನಾಡಿಯಾಗಿದೆ ಎಂದರೇ ತಪ್ಪಾಗಲಾರದು. ನದಿಗಳು ಸಾಮಾನ್ಯವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧೀಕರಣ ಮಾಡುತ್ತವೆ. ಜನರು ಪಾಪಗಳನ್ನು ಕಳೆದು ಮೋಕ್ಷವನ್ನು ಪಡೆಯಲು ಪುಣ್ಯ ನದಿಗಳಲ್ಲಿ ಮಿಂದು ಪುಣ್ಯ ಸ್ನಾನ ಮಾಡುವ ಅಭ್ಯಾಸ ಕಂಡುಬರುತ್ತದೆ. ಉದಾಹರಣೆಗೆ ಗಂಗೆ ಪಾಪಗಳನ್ನು ತೊಳೆಯುತ್ತಾಳೆ ಎಂಬುದು ಎಲ್ಲರ ನಂಬಿಕೆ. ಅದೇ ರೀತಿಯಲ್ಲಿ ಪ್ರತಿಯೊಂದು ನದಿಗೂ ತನ್ನದೇ ಅದ ವಿಶೇಷತೆಗಳು, ಮಹತ್ವಗಳು, ವೈಶಿಷ್ಟ್ಯತೆಗಳು ಇರುವುದರ ಜೊತೆಗೆ, ಅವುಗಳ ಉಗಮದ ಬಗ್ಗೆ ವಿಭಿನ್ನವಾದ ಪೌರಾಣಿಕ ದಂತ ಕಥೆಗಳನ್ನು ಹೊಂದಿವೆ. ಅವುಗಳಲ್ಲಿ ಕೆಲವು ನದಿಗಳ ಬಗೆಗಿನ ಮಾಹಿತಿ ಇಲ್ಲಿವೇ.

1. ಗಂಗಾ ನದಿ

ಗಂಗಾ (ಗಂಗಾ) ನದಿಯು ಗೌಮುಖದಲ್ಲಿ ಹುಟ್ಟುತ್ತದೆ, ಇದು ಭಾರತದ ಉತ್ತರಾಖಂಡದ ಗಂಗೋತ್ರಿ ಹಿಮನದಿಯ ತಳದಲ್ಲಿದೆ. ಈ ನದಿಯು ಭಾಗೀರಥಿಯಾಗಿ ಹೊರಹೊಮ್ಮುತ್ತದೆ ಮತ್ತು ದೇವಪ್ರಯಾಗದಲ್ಲಿ ಅಲಕನಂದಾ ನದಿಯನ್ನು ಸೇರಿ ಗಂಗೆಯಾಗುತ್ತದೆ.

ಹಿಂದೂ ಪುರಾಣಗಳಲ್ಲಿ ಭಗೀರಥನು ತನ್ನ ಪೂರ್ವಜರಿಗೆ ಮೋಕ್ಷವನ್ನು ನೀಡಲು ಗಂಗಾ  ನದಿಯನ್ನು ಭೂಮಿಗೆ ತಂದನು. ಭಗೀರಥನ ಪೂರ್ವಜರು ಶಾಪಗ್ರಸ್ತರಾಗಿದ್ದರು ಮತ್ತು ಅವರಿಗೆ ಗಂಗಾ ನೀರು ಮುಕ್ತಿ ನೀಡಬೇಕಾಗಿತ್ತು ಎಂಬ ಕಾರಣದಿಂದಾಗಿ ಇದು ಸಂಭವಿಸಿತು. ಭಗೀರಥನು ವರ್ಷಗಳ ಕಾಲ ತಪಸ್ಸು ಮಾಡಿ ಬ್ರಹ್ಮನಲ್ಲಿ ಬೇಡಿಕೊಂಡನು, ಅಂತಿಮವಾಗಿ ಬಹ್ಮದೇವನು ದೈವಿಕ ನದಿಯನ್ನು ಸ್ವರ್ಗದಿಂದ ಭುವಿಗೆ ಕಳುಹಿಸಲು ಒಪ್ಪಿಕೊಂಡನು ಮತ್ತು ಸ್ವರ್ಗೀಯ ನಿವಾಸದಿಂದ ಬಿಡುಗಡೆ ಮಾಡಿದನು. ಅದರೇ ಭೂಮಿಯು ಅವಳ ಪೂರ್ಣ ಶಕ್ತಿಯನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಭಗೀರಥನು ಶಿವನನ್ನು ಗಂಗೆಯ ಬಲವನ್ನು ನಿಯಂತ್ರಿಸುವಂತೆ ಶಿವನ ಮೊರೆಹೋದ ಭಗೀರಥನ ತಪಸ್ಸಿನಿಂದ ಪ್ರಭಾವಿತನಾದ ಶಿವನು, ಗಂಗೆಯ ಹರಿವನ್ನು ತನ್ನ ಕೂದಲಿನಲ್ಲಿ ಹಿಡಿದು, ತನ್ನ ಜಡೆಯ ಸುರುಳಿಗಳಲ್ಲಿ ಬಂಧಿಸಿ, ಅವಳ ಅವತಾರವು ಮೃದುವಾಗಿರುವುದನ್ನು ಖಚಿತಪಡಿಸಿಕೊಂಡನು. ಒಂದು ಸಣ್ಣ ಹನಿ ಮಾತ್ರ ಭೂಮಿಗೆ ಹರಿಯಲು ಬಿಟ್ಟನು. ಶಿವನ ಜಟೆಯಿಂದ ಧರೆಗೆ ಇಳಿದ ಗಂಗೆಯು, ರಭಸದಿಂದ ಗುಡ್ಡಕಾಡುಗಳಲ್ಲಿರುವ ಗಿಡಮರಗಳನ್ನು,ಬಂಡೆ ಕಲ್ಲುಗಳನ್ನು ಬದಿಗೋತ್ತುತ್ತಾ ಭಗೀರಥನನ್ನು ಅನುಸರಿಸಿದಳು. ರಾಜನ ರಥವು ಮುಂದೆ ನಡೆದಿದೆ. ಮಾರ್ಗಮಧ್ಯದಲ್ಲಿ ಜಹ್ನುಋಷಿಗಳ ಆಶ್ರಮ ಬಂತು. ಜಹ್ನುಋಷಿಗಳು ಮಹಾ ತಪಸ್ವಿಗಳು, ಶಾಪಾನುಗ್ರಹಶಕ್ತರು. ಗಂಗೆ ರಭಸದಿಂದ ಜಹ್ನುಋಷಿಗಳ ಆಶ್ರಮವನ್ನು ಹಾಳುಮಾಡಿದಳು. ಭಗೀರಥನು ಇದನ್ನು ಗಮನಿಸಲಿಲ್ಲ. ಜಹ್ನುಋಷಿಗಳು ಕೋಪತಾಪತಪ್ತರಾದರು ಮತ್ತು ತಕ್ಷಣ ಗಂಗೆಯನ್ನು ತಮ್ಮ ಯೋಗಶಕ್ತಿಯಿಂದ ವಿಶಾಲವಾಗಿ ಬಾಯಿತೆಗೆದು ಒಂದು ಗುಟುಕಿನಂತೆ ಗಂಗೆಯನ್ನು ಕುಡಿದುಬಿಟ್ಟರು. ಗಂಗೆ ಕಾಣದಾದಳು. ಭಗೀರಥ ಹಿಂತಿರುಗಿ ನೋಡಿದಾಗ, ಗಂಗೆಯ ಸುಳುವೇ ಇಲ್ಲ. ರಾಜ ಭಯಭೀನಾಗಿ ಅಗಸ್ತ್ಯರ ಬಳಿಗೆ ಓಡಿಬಂದ, ಶರಣಾಗತನಾದ ರಕ್ಷಿಸಲು ಮೊರೆ ಇಟ್ಟ. ಭಗೀರಥನಿಗೆ ಜಹ್ನುಋಷಿಗಳ ತಪ್ಪಸ್ಸಿನ ಪ್ರಭಾವದ ಪರಿಚಯವಾಯಿತು. ತನ್ನ ವೃತ್ತಾಂತವೆಲ್ಲವನ್ನು ಋಷಿಗಳ ಸನ್ನಿಧಿಯಲ್ಲಿ ವಿಜ್ಞಾಪಿಸಿಕೊಂಡನು. ತನ್ನ ಪೂರ್ವೀಕರನ್ನು ಕರುಣಿಸಬೇಕೆಂದು ಪ್ರಾರ್ಥಿಸಿದನು. ಪಾನಮಾಡಿದ ಗಂಗೆಯನ್ನು ಹೊರಗೆ ಬಿಟ್ಟು ಉದ್ದರಿಸಲು ಬೇಡಿದ. ಕರುಣಾಮೂರ್ತಿಗಳಾದ ಜಹ್ನುಋಷಿಗಳು ಪುಣ್ಯಾತ್ಮನಾದ, ಪಿತೃದೇವತೆಗಳಲ್ಲಿ ಶ್ರೆದ್ಧೆಯುಳ್ಲ ಭಗೀರಥನ ಪ್ರಾರ್ಥನೆಯಿಂದ ಪ್ರಸನ್ನರಾದರು. ತಮ್ಮ ತಪಶಕ್ತಿಯಿಂದ ಚುಲಕಪ್ರಾಯವಾಗಿ ಪಾನಮಾಡಿದ ಗಂಗೆಯನ್ನು ಬಲಗಿವಿಯಿಂದ ಹೊರಗೆ ಬಿಟ್ಟರು. ಜಹ್ನುಋಷಿಗಳಿಂದ ಹೊರಬಂದ ಗಂಗೆ ಅಂದಿನಿಂದ ಜಾಹ್ನವಿಯಾದಳು. ಭಗೀರಥನು ಕೃತಜ್ಞತೆಯಿಂದ ಜಹ್ನುಋಷಿಗಳಿಗೆ ಪ್ರಣಾಮಗಳನ್ನು ಸಮರ್ಪಿನಿದನು. ಭಗೀರಥನು ರಥಾರೂಢನಾಗಿ ಪಾತಾಳದತ್ತ ಪಯಣಿಸಿದನು. ಜಾಹ್ನವಿಯು ಪುನಃ ಭಗೀರಥನನ್ನು ಅನುಸರಿಸಿದಳು. ಈ ರೀತಿಯಾಗಿ ಗಂಗೆ ಭೂಮಿಗೆ ಇಳಿದು ನದಿಯಾಗಿ ಹರಿದಳು ಮತ್ತು ಜನರ ಶಾಪ,ಪಾಪಗಳನ್ನು ತೆಳೆಯುತ್ತಿರುವಳು.

2. ಕಾವೇರಿ ನದಿ

ದಕ್ಷಿಣ ಭಾರತದಲ್ಲಿ ಹುಟ್ಟಿ ಜನರ ಜೀವನದಿಯಾಗಿ ಹರಿಯುವ ಕಾವೇರಿಯ ಉಗಮ ಸ್ಥಾನವಿರುವುದು ತಲಕಾವೇರಿಯಲ್ಲಿ. ವರ್ಷಕ್ಕೊಮ್ಮೆ ನಡೆಯುವ ತುಲಾ ಸಂಕ್ರಮಣದಂದು ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ಉದ್ಭವವಾಗುತ್ತಾಳೆ ಕಾವೇರಿ. ಇಂತಹ ಕಾವೇರಿಯು, ಲೋಪಾಮುದ್ರೆಯು ಬ್ರಹ್ಮನ ಮಾನಸಪುತ್ರಿ. ಸಮುದ್ರಮಥನದ ಕೊನೆಯಲ್ಲಿ ಧನ್ವಂತರಿನಾಮಕಪರಮಾತ್ಮನು ಅಮೃತಕಲಶವನ್ನು ತಂದನು. ದೇವಾಸುರರಿಗೆ ಸಮವಾಗಿ ಹಂಚಲು ನಾರಾಯಣನು ಮೋಹಿನೀರೂಪದಲ್ಲಿ ಬಂದನು. ಈ ಮೋಹಿನೀರೂಪಿ ಭಗವಂತನಿಗೆ ಸಹಕರಿಸಲು ಮಹಾಲಕ್ಷ್ಮಿಯು ಲೋಪಾಮುದ್ರೆಯನ್ನು ಸಖಿಯನ್ನಾಗಿ ಕಳುಹಿಸಿದಳು. ಕಾಲಾಂತರದಲ್ಲಿ ಚತುರ್ಮುಖ ಬ್ರಹ್ಮನು ಮಕ್ಕಳಿಲ್ಲದ ಕವೇರ ಋಷಿಗೆ ಲೋಪಾಮುದ್ರೆಯೆಂಬ ಕುಲೋದ್ಧಾರಕಳಾದ ಕನ್ನಿಕೆಯನ್ನು ದಯಪಾಲಿಸುತ್ತೇನೆ’ ಎಂದು ಅನುಗ್ರಹಿಸುತ್ತಾನೆ. ಸಂತುಷ್ಟನಾದ ಕವೇರನು ಪತ್ನಿಯೊಡಗೂಡಿ ಲೋಪಮುದ್ರೆಯನ್ನು ಸ್ವೀಕರಿಸುತ್ತಾನೆ. ಲೋಪಾಮುದ್ರೆಯು ಕವೇರಋಷಿಯ ಮಗಳನ್ನಾಗಿಯು, ಅಗಸ್ತ್ಯಋಷಿಗೆ ಪತ್ನಿಯನ್ನಾಗಿಯು ಮಾಡಿದನು. ಲೋಪಾಮುದ್ರೆಯು ಕವೇರನಿಗೆ ಮಗಳಾದದಿನದಿಂದ ಕಾವೇರಿಯೆಂದು ಪ್ರಸಿದ್ಧಳಾದಳು. ಈ ಕಾವೇರಿಯು ನದಿಯಾಗಿ ಹರಿದು ಲೋಕವನ್ನು ಪಾವನ ಮಾಡಬೇಕೆಂದು ಸಂಕಲ್ಪಿಸಿ ವಿಷ್ಣುವನ್ನು ಕುರಿತು ತಪಸ್ಸಾಚರಿಸಿದಳು. ವಿಷ್ಣುವಿನ ಅನುಗ್ರಹದಿಂದ ಕಾವೇರಿಯು ನದಿಯಾಗಿ ಬ್ರಹ್ಮಗಿರಿಯಿಂದ ನದೀರೂಪವನ್ನು ತಳೆದು ಪವಿತ್ರ ನದಿಯಾಗಿ ಹರಿದು ತನ್ನ ಸಖಿಯಾದ ಮಣಿಕರ್ಣಿಕೆಯೊಡನೆ ಸಮುದ್ರವನ್ನು ಸೇರಿದಳು. ಮತ್ತು ಜಗತ್ತನ್ನು ಪಾವನ ಮಾಡಿದಳು.

3. ಹೇಮಾವತಿ ನದಿ

ಹೇಮಾವತಿ ನದಿಯು ಪಶ್ಚಿಮ ಘಟ್ಟದ ಬೆಟ್ಟ ಶ್ರೇಣಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೇಲಬಂಗಾಡಿಯ ಜಾವಳಿಯಲ್ಲಿ ಹುಟ್ಟುತ್ತದೆ.ಇದು ಹಾಸನ ಜಿಲ್ಲೆಯ ಮೂಲಕ ಹರಿಯುತ್ತದೆ , ಇದು ಕೃಷ್ಣರಾಜಸಾಗರ ಬಳಿ ಕಾವೇರಿಯನ್ನು ಸೇರುವ ಮೊದಲು ಅದರ ಮುಖ್ಯ ಉಪನದಿ ಯಗಚಿ ನದಿ ಮತ್ತು ನಂತರ ಕೆಆರ್ ಎಸ್ ಜಲಾಶಯದ ಹಿನ್ನೀರಿನ ಪ್ರದೇಶವಾದ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿ ಕಾವೇರಿ ನದಿಯೊಂದಿಗೆ ಲೀನವಾಗುವ ಹೇಮಾವತಿ ಈ ಸಂಗಮ ಕ್ಷೇತ್ರವನ್ನು ಪವಿತ್ರವಾಗಿಸಿದ್ದಾಳೆ.

ಹೇಮಾವತಿ ನದಿ ಹುಟ್ಟು ಹೇಗಾಯಿತು ಎಂಬುದನ್ನು ನೋಡುತ್ತಾ ಹೋದರೆ ಪೌರಾಣಿಕ ಕಥೆಯ ಪ್ರಕಾರ ಈಗಿನ ಹೇಮಾವತಿ ನದಿ ಹುಟ್ಟುವ ಪ್ರದೇಶವು ದಟ್ಟ ಕಾಡಿನಿಂದ ಆವೃತವಾಗಿತ್ತು. ಆಗ ಗೌತಮ ಮುನಿಗಳು ದಂಡಕಾರಣ್ಯ ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದ ಸಂದರ್ಭ ಜಾಬಾಲಿಯ ಪುತ್ರ ಸತ್ಯಕಾಮನೆಂಬ ಬಾಲಕನು ಗೌತಮರ ಕಾಲಿಗೆ ಬಿದ್ದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ವಿದ್ಯೆ ಕಲಿಸುವಂತೆ ಬೇಡಿಕೊಳ್ಳುತ್ತಾನೆ.

ಆದರೆ ಆ ಬಾಲಕನ ಪೂರ್ವಾಪರ ತಿಳಿಯದ ಮುನಿಗಳು ನಾನು ಬ್ರಾಹ್ಮಣ ವಟುಗಳಿಗೆ ಮಾತ್ರ ವಿದ್ಯೆ ಕಲಿಸುವ ಸಂಕಲ್ಪ ಮಾಡಿರುವುದರಿಂದ ನೀನು ಯಾರು? ನಿನ್ನ ಕುಲ ಗೋತ್ರವೇನು? ಎಂದು ಪ್ರಶ್ನೆ ಕೇಳುತ್ತಾರೆ.

ಆಗ ಸತ್ಯಕಾಮನ ತಾಯಿ ಜಾಬಾಲಿಯು, ಮಗನಿಗೆ ಅವನ ಜನ್ಮ ರಹಸ್ಯವನ್ನು ಹೇಳುತ್ತಾಳೆ.ಸತ್ಯಕಾಮ ತನ್ನ ತಾಯಿ ಜಾಬಾಲಿ ಹೇಳಿದ ವಿಷಯವನ್ನು ಅವರ ಮುಂದೆ ಹೇಳುತ್ತಾನೆ. ಆಗ ತ್ರಿಲೋಕ ಜ್ಞಾನಿಗಳಾದ ಗೌತಮ ಮುನಿಗಳು ಸತ್ಯಕಾಮನ ಜನನದ ಮರ್ಮವನ್ನರಿತು ಅವನ ಸತ್ಯವಾಕ್ಯಕ್ಕೆ ಮೆಚ್ಚಿ ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಇದಾದ ಕೆಲವು ವರ್ಷಗಳ ನಂತರ ಆತನಿಗೆ ನಾಲ್ಕು ನೂರು ಗೋವುಗಳನ್ನು ಕೊಟ್ಟು, ಅವುಗಳನ್ನು ಸಾವಿರವಾಗಿ ಪರಿವರ್ತಿಸಿಕೊಂಡು ಬರುವಂತೆ ಕಳಿಸಿಕೊಡುತ್ತಾರೆ. ಗೌತಮ ಮಹರ್ಷಿಗಳ ಮಾತಿನಂತೆ ಸತ್ಯಕಾಮನು ತನಗೆ ನೀಡಿದ ಹಸುಗಳ ಸಹಿತ ಕಾಡಿಗೆ ತೆರಳುತ್ತಾನೆ. ಅಲ್ಲಿ ಅವನಿಗೆ ಪಂಚಭೂತಗಳು ಬ್ರಹ್ಮಜ್ಞಾನದ ಮತ್ತು ಆದಿಶಕ್ತಿಯ ಪರಿಚಯ ಮಾಡಿಕೊಡುತ್ತವೆ. ಅಲ್ಲಿಯೇ ಆಶ್ರಮ ನಿರ್ಮಿಸುತ್ತಾನೆ. ಆದರೆ ಗೋವುಗಳಿಗೆ ನೀರಿನ ಅವಶ್ಯಕತೆ ಇದ್ದ ಕಾರಣ ಸತ್ಯಕಾಮನು ಶಿವನನ್ನು ಕುರಿತು ಇವತ್ತಿನ ಮೇಲಬಂಗಾಡಿಯ ಜಾವಳಿಯಲ್ಲಿ ತಪಸ್ಸು ಮಾಡಲು ಆರಂಭಿಸುತ್ತಾನೆ.ಈತನ ತಪಸ್ಸಿಗೆ ಮೆಚ್ಚಿದ ಪಾರ್ವತಿ ಹಿಮಾಲಯದ ಹಿಮ ಕರಗಿ ದಂಡಕಾರಣ್ಯದ ಈ ಪ್ರದೇಶದಲ್ಲಿ ನದಿಯಾಗಿ ಪ್ರವಹಿಸುವಂತೆ ವರ ನೀಡುತ್ತಾಳೆ. ಅದರಂತೆ ಸೃಷ್ಟಿಯಾದ ಹೇಮಾವತಿ ದಂಡಕಾರಣ್ಯದಲ್ಲಿ ಗುಪ್ತವಾಗಿ ಹರಿದು ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೋಗುವ ಮಧ್ಯೆ ಬರುವ ಜಾವಳಿಯ ಸಮೀಪವಿರುವ ದಟ್ಟ ಕಾಡಿನಿಂದ ಆವೃತವಾದ ಗುಡ್ಡದಲ್ಲಿ ಉಗಮವಾಗುತ್ತಾಳೆ.

4. ಕಪಿಲ ನದಿ

ಸಗರಪುತ್ರರಿಗೆ ಸದ್ಗತಿಗಳನ್ನು ಕಲ್ಪಿಸಿದ ಕಪಿಲನಾಮಕಭಗವಂತನು, ಪಾತಾಳದಿಂದ ಹೊರಟು, ಭರತಖಂಡಕ್ಕೆ ಬಂದು, ಅಲ್ಲಿರುವ ಪಶ್ಚಿಮಘಟ್ಟಗಳಲ್ಲಿ ಒಂದಾದ ನೀಲಗಿರಿಪ್ರಾಂತದಲ್ಲಿ ತಪಸ್ಸಾನಾಚರಿಸಿದನು. ಒಮ್ಮೆ ರುದ್ರದೇವರು ಕಾಣಿಸಿಕೊಂಡು “ಕಪಿಲಮಹರ್ಷಿಗಳೇ ನೀವು ಸಾಕ್ಷಾತ್‌ ವಿಷ್ಣುಸ್ವರೂಪರು ನಿಮ್ಮಿಂದ ಲೋಕೋಪಕಾರವಾಗಲಿ” ಎಂದು ಹೇಳಿ ಅದೃಶ್ಯರಾದರು. ಕಪಿಲಮಹರ್ಷಿಯ ಸಿರಸ್ಸಿನಿಂದ ಅಮೃತಕಲಶವು ಉದ್ಭವಿಸಿ, ಕಪಿಲ ಋಷಿಯನ್ನು  ಅಭಿಷೇಕಿಸಿತು. ಹರಿಗೆ ಅಭಿಷಿಕ್ತವಾಗಿ, ನೆಲಕ್ಕಿಳಿದ ಅಮೃತದಿಂದ ತುಳಸೀವೃಕ್ಷವು ಉತ್ಪನ್ನವಾಯಿತು. ಆ ತುಳಸೀವೃಕ್ಷದ ಬುಡದಿಂದ ಕಪಿಲಾ ಎಂಬ ಪವಿತ್ರನದಿಯು ಹರಿಯಿತು. ಕೇರಳದ ಪಶ್ಚಿಮಘಟ್ಟದಲ್ಲಿ ಹುಟ್ಟಿದ ಈ ನದಿ ಕರ್ನಾಟಕದ ನರಸೀಪುರದಲ್ಲಿ ಕಾವೇರಿಯೊಟ್ಟಿಗೆ ಸಂಗಮಿಸುವುದು. ಇದರ ಒಟ್ಟು ಪ್ರಯಾಣ 230ಕಿ.ಮೀ.ಗಳು. ಇದರ ದಂಡೆಯಲ್ಲೆ ನಂಜುಂಡೇಶ್ವರನಾದ ಶ್ರೀಕಂಠೇಶ್ವರನ ದಿವ್ಯದೇವಾಲಯಾದಿಂದ ಕೂಡಿದ ನಂಜನಗೂಡು ಕ್ಷೇತ್ರವಿದೆ.

5. ನೇತ್ರಾವತಿ ನದಿ

ವರಾಹರೂಪಿಭಗವಂತನ ಆನಂದಾಶ್ರುಗಳಿಂದ ಜನಿಸಿ ಬಂದ ಮಹಾಪವಿತ್ರನದಿಯೇ ನೇತ್ರಾವತಿ. ಈ ನದಿಯಲ್ಲಿ ಸ್ನಾನಮಾಡಿ,ಇದರ ನೀರಿನ್ನು ಪಾನಮಾಡುವ ಮಾನವನು, ವಾಸುದೇವನ ಭಕ್ತನಾಗಿ ಉಧ್ರುತನಾಗುತ್ತಾನೆ ಎಂದು ಭಾಗವತವು ಹೇಳುತ್ತದೆ. ಪ್ರಾಕೃತಿಕವಾಗಿ ಈ ನೇತ್ರಾವತೀನದಿಯು ಪಶ್ಚಿಮಘಟ್ಟದ ವರಾಹಪರ್ವತದಲ್ಲಿರುವ ಗಂಗಾಮೂಲದಲ್ಲಿ ಉದ್ಭವಿಸುತ್ತದೆ. ಮಹಾಕ್ಷೇತ್ರವೆನಿಸಿದ, ಧರ್ಮಕ್ಕೆ ನಿಲಯವಾದ, ಧರ್ಮಸ್ಥಳವು ಈ ನದಿಯತೀರದಲ್ಲೇ ಇದೆ. ಧರ್ಮಸ್ಥಳದ ಆರಾಧ್ಯ ಮೂರುತಿ ಮಂಜುನಾಥನು. ಈ ನದಿಯ ಉಪ್ಪಿನಅಂಗಡಿಯಲ್ಲಿರುವ ಕುಮಾರಾದ್ರಿಯಿಂದ ಹರಿದು ಬರುವ ಕುಮಾರಧಾರಾನದಿಯೊಟ್ಟಿಗೆ ಸೇರುತ್ತದೆ. ಮುಂದೆ ಬಂಟ್ವಾಳದ ದ್ವಾರಾ ಮಂಗಳೂರಿನತ್ತ ಪ್ರಯಾಣಿಸಿ, ಅಲ್ಲಿ ಪಶ್ಚಿಮ ಸಮುದ್ರವೆನಿಸಿದ ಅರೇಬೀಯಾ ಸಮುದ್ರದಲ್ಲಿ ಸೇರುತ್ತದೆ. ಇದರ ಒಟ್ಟು ಪ್ರಯಾಣ 200ಕಿ.ಮೀ.ಗಳಷ್ಟು.

6. ಗೋಮತಿ ನದಿ

ಪವಿತ್ರ ಭಾರತದಲ್ಲಿ ಗೋಮತೀನದಿಗಳು ಎರಡು ಇವೆ. ಶ್ರೀ ಕೃಷ್ಣನ ದಿವ್ಯಸನ್ನಿಧಾನವೆನಿಸಿದ ದ್ವಾರಕೆಗೆ 10 ಕಿಲೋಮೀಟರುಗಳ ಹಿಂದೆ ಹುಟ್ಟಿ, ಕೃಷ್ಣನ ಪಾದಸ್ಪರ್ಶದಿಂದ ಪೂತವಾಗಿ, ನೇರವಾಗಿ ಸಮುದ್ರರಾಜನನ್ನು (ಅರೇಬಿಯಾ ಸಮುದ್ರವನ್ನು) ಸೇರುವ ಮಹಾನದಿ ಮೊದಲನೆಯದು. ಈ ನದಿಯ ಉಗಮಸ್ಥಾನಕ್ಕೆ ಗೋಮರಿಘಾಟ್‌ ಎನ್ನುತ್ತಾರೆ. ಗಂಡಕೀಯಲ್ಲಿ ಸಾಳಗ್ರಾಮಗಳು ದೊರೆಯುವಂತೆ, ಈ ನದಿಯು ಸಮುದ್ರವನ್ನು ಸೇರುವ ಸ್ಥಳದಲ್ಲಿ, ವಿಷ್ಣು ಸನ್ನಿಧಾನದಿಂದ ಯುಕ್ತಗಳಾದ ಚಕ್ರಾಂಕಿತಗಳು ದೊರೆಯುತ್ತವೆ. ಎರಡನೇ ಗೋಮತೀನದಿಯ ಉಪನದಿ ಭಾರತದ ಮಾಧೋತಾಂಡದ ಸಮೀಪದಲ್ಲಿರುವ ಗೋಮತೀತಾಲ್‌ ಎಂಬಲ್ಲಿ ಹುಟ್ಟಿ, 900ಕಿ.ಮೀ.ಗಳಷ್ಟು ಪ್ರಯಾಣ ಮಾಡಿ ಉತ್ತರಪ್ರದೇಶದಲ್ಲಿಯ ಸಯಿದ್‌ಪುರದಲ್ಲಿ ಗಂಗೆಯೊಡನೆ ಸಂಗಮಿಸುವುದು. ಈ ನದಿಯ ತೀರದಲ್ಲಿ ಅನೇಕ ಪುರಾಣಗಳ ಪ್ರಾದುರ್ಭಾವಕ್ಕೆ ಕಾರಣವಾದ ನೈಮಿಷಾರಣ್ಯವಿದೆ.

7. ಗಂಡಕೀ ನದಿ

ನಾರಾಯಣನ ನಿತ್ಯಸನ್ನಿಧಾನದಿಂದ ಒಪ್ಪುವ ಗಂಡಕೀನದಿಯು ನೇಪಾಳಕ್ಕೆ ಸೇರಿದೆ. ಈ ಗಂಡಕೀನದಿಯೂ ಮಸ್ತಾಂಗ್ ಎಂಬ ಸ್ಥಳದಲ್ಲಿ ಹುಟ್ಟುವುದು. ಇದರ ಜನ್ಮಸ್ಥಳ ಸಮುದ್ರಮಟ್ಟದಿಂದ 12795 ಅಡಿಗಳಷ್ಟು ಎತ್ತರ. ಗಂಡಕೀನದಿಯೂ ನೇಪಾಳದಲ್ಲೇ ಹೆಚ್ಚಾಗಿ ಹರಿಯುವುದು. ಬೀಹಾರ ರಾಷ್ಟ್ರದಲ್ಲಿ ಚಂಪಾರಣ್‌ ಎಂಬ ಸ್ಥಳದಲ್ಲಿ ಭಾರತವನ್ನು ಪ್ರವೇಶಿಸಿದ ಗಂಡಕೀನದಿ, ಬಿಹಾರದ ಉದ್ದಕ್ಕೂ ಹರಿದು, ಮುಂದೆ ಪಾಟ್ನಾದ ಸೋನಾಪುರಕ್ಕೆ ಸೇರಿದ ಹರಿಹರಕ್ಷೇತ್ರದಲ್ಲಿ ಗಂಗೆಯೊಡನೆ ಸೇರಿಕೊಳ್ಳುವುದು. ಈ ನದಿ ಭಾರತೀಯರಿಗೆ ಅತ್ಯಂತ ಪವಿತ್ರ ನದಿ. ಇದರ ದಂಡೆಯಲ್ಲಿ ನಾರಾಯಣ ಕ್ಷೇತ್ರವಿದೆ. ಈ ನದಿಯ ದಂಡೆಯಲ್ಲಿರುವ ಮುಕ್ತಿನಾಥ ಎಂಬ ಸ್ಥಳದಲ್ಲಿ ವಿಷ್ಣುವಿನ ಪ್ರತೀಕಗಳೆನಿಸಿದ ಸಾಳಗ್ರಾಮಗಳು ದೊರೆಯುತ್ತವೆ. ಈ ಸಾಳಗ್ರಾಮಗಳಲ್ಲಿ ಭಗವಂತನ ಅನೇಕ ರೂಪಗಳನ್ನು ಪ್ರಾಚೀನ ಋಷಿಮುನಿಗಳು ಗುರುತಿಸಿದ್ದಾರೆ.

8. ಸರಯೂ ನದಿ (ಫಾಘ್ರಾ)

ಸರಯೂ ನದಿಯ ಪ್ರಸ್ತುತ ಹೆಸರು ಫಾಘ್ರಾ, ಸರಯೂ ನದಿಯು ಟಿಬೇಟನಲ್ಲಿರುವ ಮಾನಸ ಸರೋವರದ ಬಳಿಯಲ್ಲಿರುವ ಹಿಮಪ್ರದೇಶದಿಂದ ಹುಟ್ಟಿ ಬರುತ್ತದೆ. ಈ ನದಿಯ ಉಗಮಸ್ಥಾನವು ಸಮುದ್ರ ಮಟ್ಟದಿಂದ 1300 ಅಡಿಗಳ ಎತ್ತರದಲ್ಲಿದೆ. ದಕ್ಷಿಣಾಭಿ ಮುಖವಾಗಿ ಹರಿಯುವ ಈ ನದಿಯ ಬಹುಭಾಗವು ನೇಪಾಳ ದೇಶದಲ್ಲೇ ಇದೆ. ಭಾರತ ದೇಶವನ್ನು ಪ್ರವೇಶಿಸುವಾಗ ಈ ನದಿಯು ಎರಡು ಕವಲುಗಳಾಗುವುದು. ಎಡದ ಕವಲಿನ ಹೆಸರು “ಗೀರ್ವ”. ಬಲದ ಕವಲಿನ ಹೆಸರು “ಕೌರಿಯಾಲಾ”. ಮುಂದೆ ಈ ಎರಡು ಕವಲುಗಳು ಜೊತೆಗೂಡಿ ಫಾಘ್ರಾ ಎಂಬ ಹೆಸರಿನಿಂದ ಅಯೋಧ್ಯಾ ಪಕ್ಕದಲ್ಲಿ ಹರಿದು, ಮುಂದೆ ಬೀಹಾರದಲ್ಲಿ ಗಂಗೆಯೊಢನೆ ಸೇರಿ, ಪೂರ್ವ ಸಮುದ್ರವೆನಿಸಿದ ಬಂಗಾಳಾಖಾತದಲ್ಲಿ ಲೀಲವಾಗುವುದು. ಈ ನದಿಯ ಒಟ್ಟು ಪ್ರಯಾಣ 1080 ಕಿ.ಮೀ.ಗಳಷ್ಟು.

9. ಭೀಮಾ ನದಿ

ಭೀಮಾನದಿಯ ಕೃಷ್ಣಾನದಿಯಂತೆ ಮಹಾರಾಷ್ಟ್ರದಲ್ಲಿರುವ ಸಹ್ಯಾದ್ರಿಗೆ ಸೇರಿದ ಭೀಮಾಶಂಕರ ಬೆಟ್ಟದಲ್ಲಿ ಹುಟ್ಟುತ್ತದೆ. 861 ಕಿ.ಮೀ.ಗಳಷ್ಟು ಪ್ರಯಾಣ ಮಾಡಿ ರಾಯಚೂರು ಜಿಲ್ಲೆಗೆ ಸೇರಿದ ಕೃಷ್ಣಾಕ್ಷೇತ್ರದಲ್ಲಿ ಕೃಷ್ಣಾನದಿಯೊಟ್ಟಿಗೆ ಸಂಗಮಿಸುವುದು. ಭೀಮಾನದಿ ತೀರದಲ್ಲೇ ನಾದಬ್ರಹ್ಮನೆಂದು ಪ್ರಸಿದ್ಧನಾದ ವಿಠಲನ ದಿವ್ಯ ಸನ್ನಿಧಾನದಿಂದ ಒಪ್ಪುವ ಪಂಢರಾಪುರವಿದೆ. ಹರಿದಾಸರಿಗೆ ವೇಂಕಟೇಶನ ತಿರುಮಲೆ ಹೇಗೋ ಹಾಗೆ ಫಂಢರಾಪುರವು ಸಹ ಅವರ ಪಾಲಿಗೆ ತವರು ಮನೆಯಾಗಿದೆ. ಪುರಂದರ ದಾಸರ ಜೀವನವನ್ನು ಪಾವನ ಮಾಡಿದ ಪವಿತ್ರ ಕ್ಷೇತ್ರವಿದು. ಹರಿದಾಸ ಸಾಹಿತ್ಯದಲ್ಲಿ ಮೇರುಕೃತಿ ಎನಿಸಿದ ಹರಿಕಥಾಮೃತಸಾರ ಗ್ರಂಥ ಪ್ರಣೇತ್ಮಗಳಾದ ಜಗನ್ನಾಥದಾಸರಿಗೆ “ಜಗನ್ನಾಥವಿಠಲ” ಎಂಬ ಅಂಕಿತನಾಮದಿಂದ ಕೂಡಿದ ಶಿಲಾಫಲಕವು ಈ ಪವಿತ್ರ ನದಿಯಲ್ಲೇ ದೊರೆತು, ದಾಸರು ಮಹಾಜ್ಞಾನಿಗಳಾದರು.

10. ಕೃಷ್ಣಾ ನದಿ

ಕೃಷ್ಣಾನದಿಯು ಮಹಾರಾಷ್ಟ್ರದಲ್ಲಿರುವ ಸಹ್ಯಾದ್ರಿಪರ್ವತ ಪ್ರಾಂತದಲ್ಲಿಯ ಸಂಗಮೇಶ್ವರದಲ್ಲಿ ಉಗಮವಾಗುವುದು. ಈ ಕೃಷ್ಣಾನದಿಯನ್ನೇ ಕೃಷ್ಣವೇಣಿ ಎಂತಲೂ ಕರೆಯುವರು.1300 ಕಿ.ಮೀ.ಗಳಷ್ಟು ಪ್ರಯಾಣಮಾಡಿದ ಕೃಷ್ಣವೇಣಿಯು ಪೂರ್ವದಿಕ್ಕಿನಲ್ಲಿರುವ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಸೇರುತ್ತದೆ. ಕೃಷ್ಣಾನದಿಗೆ ತುಂಗಭದ್ರಾದಿ 11 ಉಪನದಿಗಳು ಬಂದು ಸೇರಿಕೊಳ್ಳುತ್ತದೆ. ಬಲಭಾಗದಲ್ಲಿ ವೆನ್ನಾ, ಕೋಯಿನಾ, ವಸನಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳುಬಂದು ಸೇರಿದರೆ, ಎಡಭಾಗದಲ್ಲಿ ಮಲ್ಲಾ, ಮೂಸೀ, ಮುನ್ನೇರು, ಭೀಮಾನದಿಗಳು ಬಂದು ಸೇರುತ್ತವೆ. ತುಂಗಭದ್ರಾನದಿಯು ಮತ್ತು ಭವನಾಸಿನೀ ನದಿಯು ಆಂಧ್ರದ ಕರ್ನೂಲು ಜಿಲ್ಲೆಗೆ ಸೇರಿದ ಸಂಗಮೇಶ್ವರ ಎಂಬ ಪವಿತ್ರಕ್ಷೇತ್ರದಲ್ಲಿ ಕೃಷ್ಣಾನದಿಯೊಟ್ಟಿಗೆ ಸೇರಿಕೊಳ್ಳುತ್ತದೆ.

11. ತುಂಗಭದ್ರಾ ನದಿ

ತುಂಗಭದ್ರಾ ನದಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಹುಟ್ಟುವುದರ ಜೊತೆಗೆ, ಕರ್ನಾಟಕ ರಾಜ್ಯದ ಮೂಲಕ ಪ್ರಾರಂಭವಾಗಿ ಹರಿಯುತ್ತದೆ. ನಂತರ ಆಂಧ್ರಪ್ರದೇಶದ ಮೂಲಕ ಹರಿಯುತ್ತದೆ ಮತ್ತು ಅಂತಿಮವಾಗಿ ಆಂಧ್ರಪ್ರದೇಶದ ಮುರ್ವಕೊಂಡ ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ. ತುಂಗಭದ್ರಾ ನದಿಯು ತನ್ನ ಹೆಸರನ್ನು ಎರಡು ಹೊಳೆಗಳಿಂದ ಪಡೆದುಕೊಂಡಿದೆ, ತುಂಗಾ, ಸುಮಾರು 147 ಕಿಮೀ (91 ಮೈ) ಉದ್ದ ಮತ್ತು ಭದ್ರಾ, ಸುಮಾರು 178 ಕಿಮೀ (111 ಮೈ) ಉದ್ದ, ಇವು ಪಶ್ಚಿಮ ಘಟ್ಟಗಳಲ್ಲಿ (ಸಹ್ಯಾದ್ರಿ ಪರ್ವತಗಳು) ಹುಟ್ಟುತ್ತವೆ. ಶಿವಮೊಗ್ಗ ಬಳಿಯ ಕೂಡಲಿಯಲ್ಲಿ ಎರಡು ಹೊಳೆಗಳ ಸಂಗಮದ ನಂತರ ಆಂಧ್ರಪ್ರದೇಶದ ಸಂಗಮಲೇಶ್ವರಂನಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ. ದೈತ್ಯನಾದ ಆದಿಹಿರಣ್ಯಾಕ್ಷನು ಮಹಾಕ್ರೂರಿ. ಸಜ್ಜನರ ಸಾಧನೆಗೆ ಅನುವಾದ ಭೂಮಿ ಅವರಿಗೆ ದೊರೆಯದಂತೆ ಮಾಡಲು ಆ ಕ್ರೂರಿ ಭೂಮಿಯನ್ನೆ ಪಾತಾಳಕ್ಕೆ ಒತ್ತಿದನು. ಇಂಥಾ ಆದಿಹಿರಣ್ಯಾಕ್ಷನನ್ನು ಸಂಹರಿಸಲು ಭಗವಂತನು ವರಾಹರೂಪನ್ನು ಧರಿಸಿದನು. ಆದಿಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಉದ್ಧರಿಸಿದನು. ಈ ಆನಂದಮಯನಾದ ವರಾಹರೂಪಿಯ ಬಲಕೋರೆಯಿಂದ ತುಂಗೆ ಎಂಬ ನದಿಯು ಹರಿದು ಬಂದಳು.ಇದರಂತೆ ಎಡಕೋರೆಯಿಂದ ಭದ್ರೆ ಎಂಬ ನದಿಯು ಹುಟ್ಟಿಬಂದಳು . ಈ ಎರಡು ನದಿಗಳು ಪರಸ್ಪರ ಮಿಲನ ಹೊಂದಿ, ತುಂಗಭದ್ರೆ ಎಂಬ ನಾಮದಿಂದ ಒಂದಾಗಿ ಹರಿದವು.ತುಂಗಭದ್ರೆಯ ನೀರು ಅತ್ಯಂತ ಸಿಹಿ ಇದರಿಂದಾಯೇ “ಗಂಗಾಸ್ನಾನ ತುಂಗಾಪಾನ” ಎಂಬ ನಾಣ್ಲುಡಿ ಪ್ರಸಿದ್ಧವಾಗಿದೆ.

12. ಸರಸ್ವತೀ ನದಿ

ಸರಸ್ವತೀನದಿಯು ಹಿಮಾಲಯದ ಶಿವಾಲಿಕ ಬೆಟ್ಟದಲ್ಲಿ ಹುಟ್ಟುವ ನದಿ. ಇವಳು ಬಹುಭಾಗ ಅಂತರ್ಗಾಮಿಯಾಗಿಯೇ ಹರಿಯುವಳು. ಇದಕ್ಕೆ ಒಂದು ಸುಂದರವಾದ ಪೌರಾನೀಕ ಕಥೆಯೂ ಇದೆ. ಒಮ್ಮೆ ವೇದವ್ಯಾಸರು ಸರಸ್ವತೀದಂಡೆಯ ಮೇಲೆ ಕುಳಿತು ಪುರಾಣ ರಚನೆಯಲ್ಲಿ ತೊಡಗಿದ್ದರು. ಪಾರ್ವತೀಪುತ್ರ ಗಣಪತಿ ಲೇಖನಕಾರ್ಯದಲ್ಲಿ ಮುಳುಗಿದ್ದ. ಸರಸ್ವತೀಯು ಬಂಡೆಕಲ್ಲುಗಳ ಮಧ್ಯದಲ್ಲಿ ವೇಗವಾಗಿ ಹರಿಯುತ್ತಾ ಹೆಚ್ಚಿನ ಶಬ್ದವನ್ನುಂಟುಮಾಡಿದಳು. ಗಣಪತಿಗೆ ವ್ಯಾಸರ ಮಾತುಗಳು ಕೇಳದಂತಾದವು. ನಾರಾಯಣಾವಾತಾರಿಗಳಾದ ವ್ಯಾಸರು ಕೋಪಗೊಂಡಂತೆ ನಟಿಸಿದರು. ಸರಸ್ವತೀ ! ನೀನು ಅಂತರ್ಗಾಮಿಯಾಗು. ನಿನ್ನ ಪ್ರವಾಹ ಮೇಲೆ ಕಾಣಿಸುವುದು ಬೇಡ ಎಂದರು ತಕ್ಷಣ ಸರಸ್ವತೀ ಭೂಮಿಯಲ್ಲಿ ಹೊಕ್ಕು ಅದೃಶ್ಯಳಾದಳು. ಇದನ್ನು ಸಾಮ, ಯಜು, ಋಗ್ವೇದಗಳ ವಚನಗಳು ಸಮರ್ಥಿಸುತ್ತವೆ. ಭಾರತವು ಸಹ ಇದನ್ನೇ ಹೇಳಿದೆ.

13. ಸಿಂದೂ ನದಿ

ಸಿಂದೂನದಿಯು ಭಾರತದಲ್ಲೆ ಅತ್ಯಂತ ವಿಶಾಲವಾದ ನದಿ. ಮಾನಸ ಸರೋವರದಿಂದ ಹೊರಟ ಈ ನದಿ 3180 ಕಿ.ಮೀ.ಗಳಷ್ಟು ಪ್ರಯಾಣಿಸಿ ಅರೇಬಿಯಾ ಎಂಬ ಹೆಸರಿನ ಸಮುದ್ರವನ್ನು ಸೇರುತ್ತದೆ. ವೇದದಲ್ಲಿ ಈ ನದಿಯ ಮತ್ತು ಇದರೊಟ್ಟಿಗೆ ಸೇರುವ ಉಪನದಿಗಳ ಉಲ್ಲೇಖ ಬಂದಿದೆ. ಕುಭಾ, ವಿತಸ್ತಾ, ಅಶಕ್ನೀ, ಪರುಷ್ಣೀ, ಶತದ್ರೂ, ವಿಪಾಕಾ, ನದಿಗಳೊಟ್ಟಿಗೆ ಬೆರೆತು ಹರಿಯುವ ಈ ಸಿಂಧು ಸಪ್ತಸಿಂಧು ಎಂಬ ನಾಮದಿಂದಲೂ ಕರೆಯಲ್ಪಡುತ್ತದೆ. ಸಂಗಮಸ್ಥಳದಲ್ಲಿರುವ ನದಿಗೆ ಸೇರಿದ ನಾರಾಯಣ ಸರೋವರದ ದಂಡೆಯಲ್ಲಿ ದಕ್ಷಪ್ರಜಾಪತಿಯ ಪುತ್ರರೆನಿಸಿದ ಶಬಲಾಶ್ವರು, ಬರ್ಹಿರಾಜನ ಪುತ್ರರೆನಿಸಿದ ಹರ್ಯಷ್ವರು ತಪ್ಪಸ್ಸು ಮಾಡಿ ಸಿದ್ಧಿ ಹೊಂದಿದರು. ಈ ಪವಿತ್ರಸ್ಥಳದಲ್ಲೇ ರುದ್ರದೇವರು ಪ್ರಚೇತಸರಿಗೆ ರುದ್ರಗೀತೆಯನ್ನು ಉಪದೇಶಿಸಿದರು. ಭಾರತದ ವಚನದಂತೆ ಈ ನದಿಯ ತೀರದಲ್ಲಿ ಮಾಡುವ ಸಾಧನೆ ಪುಣ್ಯಲೋಕಗಳನ್ನು ಕರುಣಿಸುವುದು.

14. ನರ್ಮದಾ ನದಿ

ನರ್ಮದಾನದಿಯು ಮಧ್ಯಪ್ರದೇಶದ ಅಮರಕಂಟಕ ಬೆಟ್ಟದಲ್ಲಿವ ನರ್ಮದಾಕುಂಡದಿಂದ ಉದಯಿಸಿರುವಳು. ಇವಳು ಪೂರ್ವದಿಂದ ಪಶ್ಚಿಮದ ಕಡೆಗೆ ಹರಿಯುವಳು. ಇವಳು ದಕ್ಷಿಣಭಾರತವನ್ನು, ಉತ್ತರಭಾರತವನ್ನು ವಿಂಗಡಿಸುವ ಸೀಮಾನದಿಯಾಗಿರುವಳು. ಇವಳ ಒಟ್ಟು ಪ್ರಯಾಣದ ಹಾದಿ 1312 ಕಿ.ಮೀ.ಗಳಷ್ಟು. ಕೊನೆಗೆ ಪಶ್ಚಿಮದಿಕ್ಕಿನಲ್ಲಿರುವ ಅರೇಬಿಯಾ ಸಮುದ್ರದಲ್ಲಿ ಸಂಗಮವನ್ನು ಹೊಂದುವಳು.

ಪಿತೃದೇವತೆಗಳ ಪುತ್ರಿಯಾಗಿ, ಸೂರ್ಯವಂಶಜನಾದ ಪುರುಕುತ್ಸರಾಜನ ಪಟ್ಟಮಹಿಷಿಯಾಗಿ, ತ್ರಸದ್ದಸ್ಯುವಿನ ತಾಯಿಯಾಗಿ ಜೀವನ ನಡೆಸಿದ ಈ ನರ್ಮದೆಯೇ ಭಗವಂತನನ್ನು ಪ್ರಾರ್ಥಿಸಿ ಕರ್ಮಭೂಮಿ ಎನಿಸಿದ ಭಾರತದ ಜನರನ್ನು ಪಾವನ ಮಾಡಲು, ನರ್ಮದಾ ಎಂಬ ಹೆಸರಿನಿಂದ ಹರಿದಳು. ನರ್ಮದಾದೇವಿಯಿಂದ ಅಭಿಮನ್ಯಮಾನವಾದ, ಜಡವೆನಿಸಿದ ನೀರಿನಿಂದ ಕೂಡಿದ ನರ್ಮದಾ ನದಿಯ ಉತ್ಪತ್ತಿಯ ಕಥೆಯು ಅಪೂರ್ವವಾಗಿದೆ. ಒಮ್ಮೆ ಚತುರ್ಮುಖ ಬ್ರಹ್ಮನು ಭಗವಧ್ಯಾನದಲ್ಲಿ ಮೈಮರೆತನು, ಪುಲಕಿತಗಾತ್ರನಾದನು. ಆಗ ಅವನ ಕಣ್ಣುಗಳಿಂದ ಆನಂದಾಶ್ರುಗಳು ಪ್ರವಾಹರೂಪದಲ್ಲಿ ಹರಿದವು. ಇದೇ ಸಮಯದಲ್ಲಿ ರುದ್ರದೇವರು ಕೈಲಾಸಪರ್ವತದಲ್ಲಿ ಭಗವಚ್ಚಿಂತನೆಯಿಂದ ಮೈಮರೆತು ಬತಾಂಡವನೃತ್ಯ ಮಾಡಿದರು, ಆ ಸಂದರ್ಭದಲ್ಲಿ ಅವರ ಮೈಯಿಂದ ಬೆವರು ಉತ್ಪನ್ನವಾಗಿ ಪ್ರವಾಹರೂಪದಲ್ಲಿ ಹರಿಯಿತು. ಬ್ರಹ್ಮನ ಆನಂದಾಶ್ರುಗಳು ಮತ್ತು ರುದ್ರದೇವರ ಮೈಬೆವರು ಒಂದುಗೂಡಿ ನರ್ಮದಾ ನದಿಯಾದವು. ನರ್ಮದಾನದಿಯ ಪರಮಪವಿತ್ರೆತೆಯ ಬಗ್ಗೆ ಒಂದು ಸುಂದರ ಇತಿಹಾಸವಿದೆ. ಪರಮಪವನಳೆನಿಸಿದ ಗಂಗೆ ಪಾಪಿಗಳ ನಿತ್ಯಸ್ನಾನದಿಂದ ಕಪ್ಪಾಗುವಳಂತೆ. ಕಪ್ಪಾದ ಗಂಗೆ ಕಪಿಲಗೋವಿನ ರೂಪವನ್ನು ಧರಿಸಿ, ನಿತ್ಯ ನರ್ಮದೆಗೆ ಬಂದು ಶುದ್ಧಳಾಗುತ್ತಾಳಂತೆ. ಇದು ನರ್ಮದೆಯ ಪವಿತ್ರತೆಯನ್ನು ಸ್ಪಷ್ಟಪಡಿಸುವುದು. ನರ್ಮದೆಯು ಮಹಾನದಿಯೆನಿಸಿಕೊಂಡು ಭಾರತದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದಾಗಿದೆ.

ಗಂಡಕೀನದಿಯು ವಿಷ್ಣುಸನ್ನಿಧಾನದಿಂದ ಕೂಡಿದ ಸಾಲಗ್ರಾಮಗಳ ಉಗಮಸ್ಥಾನ. ಇಲ್ಲಿ ಸಾಲಗ್ರಾಮಗಳು ದೊರೆಯುವಂತೆ, ನರ್ಮದಾ ನದಿಯಲ್ಲಿ ಶಿವನ ದಿವ್ಯಸನ್ನಿಧಾನದಿಂದ ಶೋಭಿಸುವ ಸ್ಫಟಿಕಲಿಂಗಗಳು ದೊರೆಯುತ್ತವೆ. ನರ್ಮದೆಯು ಸ್ಫಟಿಕಲಿಂಗಗಳ ಉಗಮಸ್ಥಾನ. ಇಲ್ಲಿದೊರೆತ ಲಿಂಗಗಳ ಆರಾಧನೆ ಅತ್ಯಂತಶ್ರೇಷ್ಟವಾದದ್ದು. ಇಂಥಾ ಪವಿತ್ರವಾದ ನದಿಯ ತೀರದಲ್ಲೇ ಹಿಂದೆ ಬಲಿಚಕ್ರವರ್ತಿಯು 99 ಅಶ್ವಮೇಧಯಾಗಗಳನ್ನು ನಿರ್ವಹಿಸಿದನು ಈ ಯಾಗಮಂಟಕ್ಕೇನೇ ವಾಮನರೂಪಿ ಭಗವಂತನು ಬಲಿಚಕ್ರವರ್ತಿಯನ್ನು ಉದ್ದರಿಸಲು ವಟುವೇಷದಾರಿಯಾಗಿ ಬಂದು, ಮೂರು ಹೆಜ್ಜೆ ಭೂದಾನವನ್ನು ಬೇಡಿದನು. ಈ ನರ್ಮದಾ ನದಿ ತೀರದಲ್ಲೇ ಸಾವಿರತೋಳುಗಳಿಂದ ಕೂಡಿದ ಮಹಾಬಲಶಾಲಿಯಾದ ಕಾರ್ತವೀರ್ಯಾರ್ಜುನನು ತಪಸ್ಸನ್ನು ಮಾಡಿ ಅಣಿಮಾದಿ-ಅಷ್ಟಸಿದ್ಧಿಗಳನ್ನು ಪಡೆದನು.

15. ಯಮುನಾ ನದಿ

ಯಮುನಾ ನದಿಯು ಉತ್ತರಾಖಂಡದ ಮಹಾ ಹಿಮಾಲಯದ ಬಂದರ್‌ಪಂಚ್‌ ಪರ್ವತಶ್ರೇಣಿಯಲ್ಲಿರುವ ಯಮುನೋತ್ರಿ ಹಿಮನದಿಯಿಂದ ಹುಟ್ಟುತ್ತದೆ. ಇದು ಹಿಮಾಲಯದ ತಪ್ಪಲಿನ ಮೂಲಕ ದಕ್ಷಿಣಕ್ಕೆ ಹರಿಯುತ್ತದೆ ಮತ್ತು ಇಂಡೋ-ಗಂಗಾ ಬಯಲಿಗೆ ಹರಿಯುತ್ತದೆ, ಪ್ರಯಾಗರಾಜ್ (ಅಲಹಾಬಾದ್) ನಲ್ಲಿ ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ. ಹೆಚ್ಚಾಗಿ ಹಿಂದೂ ಧರ್ಮದಲ್ಲಿ. ಇದನ್ನು ಪವಿತ್ರ ನದಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರ ನೀರು ಸಾವಿನ ನೋವಿನಿಂದ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ. ಯಮುನೆಯು ವಿವಿಧ ಹಿಂದೂ ನಂಬಿಕೆಗಳೊಂದಿಗೆ ಸಂಬಂಧ ಹೊಂದಿದೆ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಯಮುನಾ ನದಿಯ ಅಭಿಮಾನಿ ದೇವತೆ ಯಮುನಾದೇವಿ. ಇವಳು ಸೂರ್ಯನ ಪುತ್ರಿ ಮತ್ತು ಮರಣದ ದೇವರು ಯಮನ ಸಹೋದರಿ. ಸೂರ್ಯನಿಗೆ ಒಂಬತ್ತು ಜನ ಮಕ್ಕಳು. ಯಮ, ಶನಿ, ನಾಸತ್ಯ, ದಸ್ರ (ಅಶ್ವಿನಿದೇವತೆಗಳು) ವೈವಸ್ವಮನು,ಸೂರ್ಯಸಾವರ್ಣಿ, ತಪತಿ, ಕಾಳಿಂದಿ, ಯಮುನೇ(ಯಮಿ). ಹರಿದ್ವಾರದ ಉತ್ತರಕ್ಕೆ ಇರುವ ಹಿಮಾಲಯಕ್ಕೆ ಸೇರಿದ ಬಂದರ್‌ಪೂಂಛ್‌ ಶಿಖರಗಳ ನೈರುತ್ಯಕ್ಕಿರುವ ಯಮುನೋತ್ರಿ ಎಂಬ ಪರ್ವತದಿಂದ ಈ ಯಮುನೆಯು ಜನಿಸಿ ಬಂದಿರುವಳು. ಇವಳ ಉಗಮಸ್ಥಾನ ಸಮುದ್ರಮಟ್ಟದಿಂದ 10613 ಅಡಿ ಎತ್ತರದಲ್ಲಿರುವುದು.ಯಮುನೋತ್ರಿಯ ಪಕ್ಕದಲ್ಲೇ ಇರುವ ಪರ್ವತದಿಂದ ಕಾಳಿಂದೀ ನದಿಯು ಹರಿದು ಬಂದಿರುತ್ತಾಳೆ.ಕಾಳಿಂದೀನದಿಯು ಪುಟ್ಟ ನದಿಯಾಗಿ ಹರಿದು ಸ್ವಲ್ಪೇದೂರದಲ್ಲಿ ಯಮುನೆಯೊಟ್ಟಿಗೆ ಸೇರುತ್ತದೆ. ಇದರಿಂದಾಗಿಯೇ ಯಮುನೇಯನ್ನು ಕಾಳಿಂದೀ ಎಂದೇ ಕರೆಯುತ್ತಾರೆ. ಗಂಗೆಗೆ ತ್ರಿವಿಕ್ರಮನ ಪಾದಸ್ಪರ್ಶದ ಸಂಬಂಧ ಮಾತ್ರ, ಕಾಳಿಂದಿಯಿಂದ ಕೂಡಿದ ಯಮುನೆಗೆ ಕೃಷ್ಣರೂಪಿ ಭಗವಂತನ ಸರ್ವಾಂಗಸಂಗದ ಸುಖಪ್ರಾಪ್ತಿ.ಕೃಷ್ಣನ ಬಾಲಲೀಲಗಳಿಗೆ ಯಮುನಾತೀರವೇ ತಾಣ. ಬಾಲಗೋಪಲನು ಯಮುನಾತೀರದಲ್ಲಿ ಗೋಪಾಲಕರಿಂದ ಕೂಡಿ ಗೋವುಗಳನ್ನು ಕಾಯ್ದನು. ಗೋಪಾಲಕರಿಂದ ಕೂಡಿ ವನಭೋಜನ ಮಾಡಿದನು. ಗೋಪಿಕೆರ ಸೀರೆಗಳನ್ನು ಕದ್ದು ದೇಹಾಭಿಮಾನವನ್ನು ಬಿಡುವ ಬಗೆಯನ್ನು ತಿಳಿಸಿದನು. ಗೋಪಿಕೆರೊಡನೆ ಸೇರಿ ಜಲಕ್ರೀಡೆಯಾಡಿದನು. ದುಷ್ಟಕಾಳಿಂಗನ ಹೆಡೆಯ ಮೇಲೆ ಕುಣಿದು,ಅವನ ಅಹಂಕಾರವನ್ನು ಕಳೆದ. ಕೃಷ್ಣನ ಈ ಎಲ್ಲಾ ಬಾಲಲೀಲೆಗಳನ್ನು ಗೋಪಿಕೆಯರು, ಗೋವುಗಳು, ಬಂಧುಮಿತ್ರರು ಕಂಡು ಆನಂದಿಸಿದರು. ಒಟ್ಟಿನಲ್ಲಿ ಯಮುನೆ ಕೃಷ್ಣನ ಅಂತರಂಗದಲ್ಲಿ ಮನೆಮಾಡಿ ಮುದ ಪಡೆದಳು.

16. ಕಾಳಿಂದೀ ನದಿ

ಸೂರ್ಯ ಪುತ್ರಿಯಾದ ಯಮುನೇಯ ತಂಗಿ ಎನಿಸಿದ ಕಾಳಿಂದೀ ದೇವಿಯು ( ಇವಳು ಕಾಳಿಂದೀ ನದಿಯ ಅಭಿಮಾನಿ). ಯಮುನೋತ್ರಿಯ ಪಕ್ಕದಲ್ಲೇ ಇರುವ ಕಾಳಿಂದೀ  ಪರ್ವತದಿಂದ ಕಾಳಿಂದೀ ನದಿಯು ಹರಿದು ಬಂದಿರುತ್ತಾಳೆ. ಕಾಳಿಂದೀನದಿಯು ಪುಟ್ಟ ನದಿಯಾಗಿ ಹರಿದು ಸ್ವಲ್ಪೇದೂರದಲ್ಲಿ ಯಮುನೆಯೊಟ್ಟಿಗೆ ಸೇರುತ್ತದೆ.ಇತಂಹ ಕಾಳಿಂದೀಯು ಕೃಷ್ಣನು ತನಗೆ ಪತಿಯಾಗಬೇಕೆಂದು ಯಮುನಾತೀರದಲ್ಲಿ ಘೋರ ತಪಸ್ಸನ್ನಾಚರಿಸಿದಳು. ಒಮ್ಮೆ ಕೃಷ್ಣಾರ್ಜುನರು ಬೇಟೆಯಾಡುವ ನೆಪದಿಂದ ಯಮುನಾತೀರಕ್ಕೆ ಬಂದರು. ಅಲ್ಲಿ ತಪಸ್ಸನ್ನಾಚರಿಸುತ್ತಿದ್ದ ಕಾಳಿಂದೀಯನ್ನು ಅರ್ಜುನನು ಕಂಡನು. ಅರ್ಜುನನು ಕಾಳಿಂದೀಗೆ ಕೈಮುಗಿದು ತಪಸ್ಸಿನ ಕಾರಣವನ್ನು ಕೇಳಿದನು. ಕಾಳಿಂದಿಯ ಮನೋಗತವನ್ನು ಅರಿತ ಅರ್ಜುನನು ಕೃಷ್ಣನನ್ನು ಕಾಳಿಂದೀಯನ್ನು ಮದುವೆಯಾಗಿ ಕರುಣಿಸಲು ಪ್ರಾರ್ಥಿಸಿದನು. ಕೃಷ್ಣನು ಕಾಳಿಂದೀಯನ್ನು ಮದುವೆಯಾದನು. ಕಾಳಿಂದೀದೇವಿಯು ರುಕ್ಮೀಣಿ, ಸತ್ಯಭಾಮೆ, ಜಾಂಬವತಿಯರ ನಂತರ ಕೃಷ್ಣನ ಕೈ ಹಿಡಿದ ಮಡದಿ. ನದಿಯಾಗಿ ಹರಿಯುವ ಕಾಳಿಂದೀಯು ಆಕಾರದಲ್ಲಿ ಚಿಕ್ಕವಳಾದರು, ಯೋಗ್ಯತೆಯಲ್ಲಿ ಪಾರ್ವತಿದೇವಿಗಿಂತಲೂ ದೊಡ್ಡವಳು, ಶಿವನಿಗಿಂತ ಕೆಳಗಿನವಳು ಎನ್ನಲಾಗುತ್ತದೆ.

17. ಗೋದಾವರಿ ನದಿ

ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಒಂಬತ್ತನೇ ಶತಮಾನದ “ಕವಿರಾಜಮಾರ್ಗ” ಕೃತಿಯಲ್ಲಿ “ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್” ಎಂದು ಆ ಕಾಲದಲ್ಲಿ ಕನ್ನಡ ನಾಡಿನ ಹರಹು ಕಾವೇರಿಯಿಂದ ಗೋದಾವರಿವರೆಗೆ ಇತ್ತು ಎಂದು ಹೇಳಲಾಗಿದೆ.

ಒಂದು ಕಾಲದಲ್ಲಿ ದೇಶಾದ್ಯಂತ ಮಳೆಯಿಲ್ಲದೆ ಭಯಂಕರ ಕ್ಷಾಮವೇರ್ಪಟ್ಟಿತು ಋಷಿಮುನಿಗಳು ಅನ್ನ, ಪಾನೀಯಗಳಿಲ್ಲದೆ ತಪಸ್ಚಾದ್ಯಾಯಾಗಳಿಂದ ದೂರಾದರು. ದಿಕ್ಕುತೋಚದೆ ಗೌತಮರನ್ನು ಶರಣು ಹೊಂದಿದರು. ಆಹಲ್ಯೆಯ ಪತಿಯಾದ ಗೌತಮರು ಮಹಾ ತಪಸ್ವಿಗಳು. ಇದರಿಂದಾಗಿ ಗೌತಮರ ಆಶ್ರಮದ ಸುತ್ತಮುತ್ತಳಿನ ಪ್ರದೇಶವೆಲ್ಲ ಸಕಾಲದ ಮಳೆಯಿಂದಾಗಿ ಸಸ್ಯಶ್ಯಾಮಲವಾಗಿತ್ತು. ಶರಣಾಗತರಾದ ಋಷಿಗಳೆಲ್ಲರಿಗು ಗೌತಮರು ಸ್ವಾಗತ ಬಯಸಿದರು. ಬೇರೇ ಬೇರೇ ಪ್ರಾಂತ್ಯದ ಋಷಿಮುನಿಗಳೆಲ್ಲರು ತಮ್ಮತಮ್ಮ ವಾಸಸ್ಥಳಗಳನ್ನು ಬಿಟ್ಟು ಗೌತಮರ ಆಶ್ರಮದಲ್ಲಿ ಆಶ್ರಯ ಪಡೆದರು. ಗೌತಮರ ಆಶ್ರಮವು ಭೂಲೋಕದ ಸ್ವರ್ಗವಾಗಿತ್ತು. ಒಂದು ಕಡೆಯಲ್ಲಿ ಪಾಠಪ್ರವಚನಗಳು. ಮತ್ತೊಂದು ಕಡೆಯಲ್ಲಿ ಆನೇಕತರಹದ ಹವನ ಹೋಮಗಳು.  ಇನ್ನೊಂದು ಕಡೆಯಲ್ಲಿ ನಿರಂತರ ಸವಿಯೂಟ. ಎಲ್ಲ ಸಜ್ಜನರು ಆನಂದದಿಂದಿದ್ದರು. ದೇಶದ ಸೇವೆಯೇ ತಮ್ಮ ಶ್ರೇಯಸ್ಸೆಂದು ನಿಸ್ವಾರ್ಥತೆಯಿಂದ ತಪಸ್ಸನ್ನು ಆಚರಿಸುತ್ತಿದ್ದ ಋಷಿಗಳ ತಪಃಪ್ರಭಾವದಿಂದ ದೇಶಾದ್ಯಂತ ವೃಷ್ಠಿಯಾಯಿತು. ಋಷಿಮುನಿಗಳಿಗೆ ಆನಂದವಾಯಿತು. ಆಶ್ರಮದಲ್ಲಿ ಆಶ್ರಯಪಡೆದಿದ್ದ ಋಷಿಗಳು ತಮ್ಮತಮ್ಮ ಸ್ಥಳಗಲೀಗೆ ಹೋಗಲು ಗೌತಮರಲ್ಲಿ ಅನುಮತಿ ಬೇಡಿದರು. ಗೌತಮರು ಅನುಮತಿ ನೀಡಲಿಲ್ಲ, ಪರಾನ್ನ ಶ್ರೇಯಸ್ಕರವಲ್ಲವೆಂದು ಚಿಂತಿಸಿದ ಋಷಿಮುನಿಗಳು ಗೌತಮರ ಆಶ್ರಮವನ್ನು ಬಿಟ್ಟು ಹೋಗಲು, ತಮ್ಮ ತಪಃಪ್ರಭಾವದಿಂದ ಒಂದು ಮಾಯಾಗೋವನ್ನು ನಿರ್ಮಿಸಿ ಹೊಲದಲ್ಲಿ ಬಿಟ್ಟರು. ಬೆಳೆಗಳನ್ನುತಿಳಿದು ಹಾಳುಮಾಡುತ್ತಿರುವ ಮಾಯಾಗೋವನ್ನು ಕಂಡ ಗೌತಮರು,ಆಕಳನ್ನು ಅಂಜಿಸಲು ಕೈಯ್ಯಲ್ಲಿರುವ ದರ್ಭೆಯನ್ನು ಅದರ ಮೇಲೆ ಎಸೆದರು. ಮಾಯಾಗೋವು ತಕ್ಷಣ ಮೃತವಾಯಿತು. ಋಷಿಮುನಿಗಳು ಗೌತಮರ ಮೇಲೆ ಗೋಹತ್ಯೆಯನ್ನು ಆರೋಪಿಸಿ ಆಶ್ರಮವನ್ನು ಬಿಟ್ಟು ಹೋದರು. ಗೋವಿನ ಮೃತಿಯಿಂದ ಗೌತಮರ ಮನ ನೊಂದಿತು. ಮನೋನಿಯಾಮಕರಾದ ರುದ್ರದೇವರನ್ನು ಕುರಿತು ಗೌತಮರು ಪ್ರಾರ್ಥಿಸಿದರು. ರುದ್ರದೇವರು ಗೌತಮರ ಮನೋವ್ಯಾಕುಲವನ್ನು ಪರಿಹರಿಸಲು, ಮೃತವಾದ ಗೋವನ್ನು ಬದುಕಿಸಲು ತಮ್ಮ ಜಟೆಯಲ್ಲಿರುವ ಗಂಗೆಯನ್ನು ಗೌತಮರ ಕಮಂಡಕ್ಕೆ ಹರಿಸಿದರು. ಗೌತಮರು ತಮ್ಮ ಕಮಂಡಲಕ್ಕೆ ಬಂದ ಗಂಗೆಯನ್ನು ಮೃತಗೋವಿನ ಮೇಲೆ ಸುರಿದರು. ಗೋವು ಬದುಕಿತು. ಗೋವಿನ ಬದುಕಿಗಾಗಿ ಕೊಡಲ್ಪಟ್ಟ ಗಂಗೆ ಗೋದಾವರಿಯಾದಳು. ಉತ್ತರ ಭಾರತದ ಗಂಗೆ ದಕ್ಷಿಣದಲ್ಲಿ ವೃದ್ಧಗೌತಮರಿಗಾಗಿ ಹರಿದು ವೃದ್ಧಗಂಗೆ ಎನಿಸಿದಳು. ಗೌತಮರಿಗೆ ಒಲಿದು ಬಂದ ಕಾರಣ ಗೌತಮಿಯಾದಳು.ಇಂಥಾ ವೃದ್ಧಗಂಗೆಯೂ, ಗೌತಮಿಯೂ ಆದ ಗೋದಾವರಿಯು ದಕ್ಷಿಣದಲ್ಲಿ ಮಹಾ ನದಿಯಾಗಿ ಹರಿದಳು. ಜನರ ಜೀವನಗಳನ್ನು ಪಾವನ ಮಾಡಿದಳು. ದಕ್ಷಿಣದೇಶವನ್ನು ಸಸ್ಯಶ್ಯಾಮಲವನ್ನಾಗಿ ಮಾಡಿದಳು.

ಯಮುನೆ ಕೃಷ್ಣನ ಅಂಗಸ್ಪರ್ಶದಿಂದ ಪುಲಕಿತಗಾತ್ರಳಾದರೆ, ಗೋದಾವರಿ ರಾಮ ಸೀತೆಯರ ಸ್ಪರ್ಶದಿಂದ ಆನಂದವನ್ನು ಅನುಭವಿಸಿದ ಪುಣ್ಯವಂತೆ. ಆದರ್ಶಪುರುಷನಾದ ಶ್ರೀರಾಮಚಂದ್ರನು ಸಾಧ್ವೀಲಲಾಮಳಾದ ಸೀತೆಯೊಡನೆ ಗೋದಾವರಿಯ ದಂಡೆಯಲ್ಲೇ ಆಶ್ರಮವನ್ನು ನಿರ್ಮಿಸಿಕೊಂಡು ಭಹಳಷ್ಟುವರ್ಷಗಳ ಕಾಲ ವಾಸಮಾಡಿದನು. ಪುಣ್ಯಾತ್ಮನಾದ ಜಟಾಯುವು ಈ ಗೋದಾವರಿಯ ದಂಡೆಯಲ್ಲೇ ರಾಮನ ಸೇವೆಯಲ್ಲಿ ಪುನೀತನಾಗಿ, ರಾಮನಿಂದ ಅಂತ್ಯಸಂಸ್ಕಾರಾದಿಗಳನ್ನು ಹೊಂದಿ ವೈಕುಂಟವನ್ನು ಸೇರಿದನು. ಈನದಿಯ ದಂಡೆಯಲ್ಲೇ ಶ್ರೀರಾಮಚಂದ್ರನು ಮಾಯಾಜಿಂಕೆಯ ವೇಷದಲ್ಲಿ ಬಂದ ಮಾರೀಚನನ್ನು ಸಂಹರಿಸಿದನು. ಕಪಟವೇಷಧಾರಿಯಾದ ರಾವಣನು ಈ ಗೋದಾವರಿ ತೀರದಲ್ಲೇ ಸೀತಾದೇವಿಯನ್ನು ಅಪಹರಿಸಿದನು. ದುಷ್ಟಶಿಕ್ಷಣೆ ಶಿಷ್ಟರಕ್ಷಣೆ ತನ್ನ ಕರ್ತವ್ಯವೆಂಬುದನ್ನು ಶ್ರೀರಾಮನು ಈ ನದಿ ತೀರದಲ್ಲೇ ಪ್ರಕಟಿಸಿದನು.

Leave a Comment

Your email address will not be published. Required fields are marked *

en_USEN
Scroll to Top